ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ | 
ಜಳನಿಧಿಯೊಳಾದಂತೆ ಸುಧೆಗೆ ಪೇಡಿಕೆಯೇಂ? || 
ಹಾಳಾಹಲವ ಹುಡಿವ ಗಿರಿಶನಿದ್ದಿರ್ದೋಡೀ | 
ಕಳವಳದೇತಕೆಲೋ? - ಮಂಕುತಿಮ್ಮ ||					೧೭

(ತಳಮಳ+ಇದು+ಏನು+ಇಳೆಗೆ) (ಜಳನಿಧಿಯೊಳು+ಆದಂತೆ) (ಗಿರಿಶನು+ಇದ್ದಿರ್ದೋಡೇ+ಈ) (ಕಳವಳ+ಅದು+ಏತಕೆ+ಎಲೋ)

ರಾಕ್ಷಸರೂ, ದೇವತೆಗಳೂ, ಸಮುದ್ರವನ್ನು ಕಡೆದಾಗ ಕೊನೆಯಲ್ಲಿ ಅಮೃತ ದೊರಕಿದಂತೆ, ಈ ಜಗತ್ತಿನ ಈವತ್ತಿನ ತಳಮಳ, ಆ ಅಮೃತಕ್ಕೆ ನಾಂದಿಯೋ ? 
ಆ ಮಥನದಲ್ಲಿ, ಅಮೃತಕ್ಕೆ ಮುಂಚಿತವಾಗಿ, ಹಾಲಾಹಲವೆಂಬ ವಿಷ ಹುಟ್ಟಿ, ದೇವದಾನವರಲ್ಲಿ ಗಾಬರಿಯನ್ನುಂಟು ಮಾಡಿದಾಗ, ಈಶ್ವರನು ಬಂದು, ಅದನ್ನು 
ಕುಡಿದು, ಆ ಕಳವಳವನ್ನು ಹೋಗಲಾಡಿಸಿದಂತೆ, ಅದೇ ಈಶ್ವರನು ಈಗಲೂ ಇರುವಾಗ, ಈ ಕಳವಳ ಬೇಕಾಗಿಲ್ಲ. ಅನಗತ್ಯ.